ಆಟಿ ಆಡಾ ಆಡಾ ಸೋಣ ಓಡಾ ಓಡಾ ...
ಸೌರಮಾನ ಪದ್ಧತಿಯಂತೆ ತುಳು ತಿಂಗಳು ಪಗ್ಗು, ಬೇಶ, ಕಾರ್ತೆಲ್ ಕಳೆದು ಬರುವ ಆಟಿ ತಿಂಗಳು ಎಂದರೆ ಕರ್ಕಟ ಮಾಸ "ಆಷಾಢ".
ಕರಾವಳಿ ನಾಡಿನ ತುಳುನಾಡಿಗೆ ಆಟಿ ತಿಂಗಳೆಂದರೆ ಕಡುಕಷ್ಟದ ಕಾಲ. ಅನಿಷ್ಟದ ಕಾಲ. ಮಳೆಗಾಲದ ಕಾಠಿನ್ಯದ ಕಾಲ. ಸಿಡಿಲು, ಮಿಂಚು, ಬಿರುಗಾಳಿ, ಅಬ್ಬರದ ಮಳೆ, ನೆರೆಯಿಂದ ಕೂಡಿದ ಭಯ ಆತಂಕದ ದಿನಗಳ ಕಾಲ.
ಕಾದರೆ ವಿಪರೀತ ಬಿಸಿಲೇ ಬಿಸಿಲು, ಸುರಿದರೆ ಎಡೆಬಿಡದ ಜಡಿಮಳೆ.
ಇಂತಹ ವೈಪರೀತ್ಯ ಹವಾಮಾನದಲ್ಲಿ ಶರೀರಕ್ಕೆ ರೋಗ ತಟ್ಟುವುದು ಬೇಗ. ಅದಕ್ಕಾಗಿಯೇ ಆಟಿ ತಿಂಗಳ ಅಮಾವಾಸ್ಯೆ ದಿನ ಮುಂಜಾಗ್ರತೆಗಾಗಿ ಹಾಳೆ ಮರದ ತೊಗಟೆ ರಸ ಕುಡಿಯುವ ರೂಢಿಯಿದೆ.
ಹಾಲೆಮರದ ಗೆಲ್ಲುಗಳಲ್ಲಿ ಗೊಂಚಲು ಗೊಂಚಲು ಎಲೆಗಳ ಗುಂಪುಗಳಿರುತ್ತವೆ. ಒಂದು ಗೊಂಚಲಲ್ಲಿ ಏಳು ಎಳೆಗಳಿರುತ್ತವೆ.
ಈ ಮರಕ್ಕೆ ಏಲೆಳಗ, ಸಪ್ತಪರ್ಣಿ ಮೊದಲಾದ ಹೆಸರುಗಳಿವೆ. ಆಂಗ್ಲ ಭಾಷೆಯಲ್ಲಿ ಇದು Apocynaceae ( a large evergreen tree )
ಈ ಮರದ ರೆಂಬೆಯನ್ನು ದೀಪಾವಳಿಯ ಸಮಯದಲ್ಲಿ ನೆಲದಲ್ಲಿ ಊರಿ ಬಲೀಂದ್ರ ಪೂಜೆ ಮಾಡುತ್ತಾರೆ.
ವರ್ಷದ ಒಂದು ನಿರ್ದಿಷ್ಟ ದಿನದಂದು ಹಾಳೆ ಮರದ (ಪಾಳೆದ ಕೆತ್ತೆದ) ಕಹಿ ಮದ್ದನ್ನು ಕುಟುಂಬದ ಪ್ರತಿ ಸದಸ್ಯರು ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದು ಪರಂಪರೆ.