Sunday, June 21, 2009

ಮತ್ತು ಮತ್ತು ಗಮ್ಮತ್ತಿನ ನೂರೆಂಬತ್ತು ಹನಿಗಳ ಬೇವು-ಬೆಲ್ಲ

ಬೇವು-ಬೆಲ್ಲ
ಹನಿಗವನಗಳು
ಅಹ್ಮದ್ ಅನ್ವರ್
೨೦೦೮
ಬೆಲೆ:೪೦/-
ವಿಚಾರ ಪ್ರಕಾಶನ, ಮಂಗಳೂರು

'ಭಾರತ
ಗೀತ : ನೂರೊಂದು ಕವಿತೆಗಳು' (೧೯೯೯), 'ಗುಲ್ಮೊಹರ್ : ಆಯ್ದ ಕವಿತೆಗಳು' (೨೦೦೩), ಹಾಗೂ 'ನನ್ನ ಕನಸಿನ ಭಾರತ : ಲೇಖನಗಳ ಸಂಕಲನ ' (೨೦೦೩), ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಪರಿಚಿತರಾಗಿರುವ ಅಹ್ಮದ್ ಅನ್ವರ್ ಅವರ ನಾಲ್ಕನೆಯ ಕೃತಿಯೇ ' ಬೇವು-ಬೆಲ್ಲ ' .

ಈ ಕೃತಿಯ ಶೀರ್ಷಿಕೆಯ ಮೇಲೆಯೇ ಒಂದು ಸುಂದರವಾದ ಹನಿಗವನ ಹೊಸೆದಿದ್ದಾರೆ.
" ಜೀವನ ನೆರಳಿನ
ಸ್ವಾದವಿದು
ಬೇವು ಬೆಲ್ಲ
ಇದನು
ತೊರೆದೆನೆ
ಬದುಕಿಗೆ
ರುಚಿಯಿಲ್ಲ "
ಹೀಗೆನ್ನುತ್ತಲೇ ೧೮೦ ಹನಿಕಾವ್ಯಗಳಿಗೆ ಕವಿ ಇಲ್ಲಿ ತಮ್ಮ ಅನುಭದ ಲೇಪದ ಅಭಿವ್ಯಕ್ತಿರೂಪ ನೀಡಿದ್ದಾರೆ.

ಇಲ್ಲಿನ ಒಟ್ಟು ಹನಿಗಳನ್ನು ಎರಡು ನೆಲೆಗಳಲ್ಲಿ ನೋಡುವುದಕ್ಕೆ ಸಾಧ್ಯ. ಮೊದಲನೆಯದು ತನ್ನ ದೇಶ, ಜನ, ಭಾಷೆ, ಧರ್ಮ, ಆಚಾರವಿಚಾರಗಳಿಗೆ ಸಂಬಂಧಿಸಿದಂತೆ ಸಂವೇದನೆಗಳು. ಎರಡನೆಯದಾಗಿ ಕಡಲಾಚೆಗಿನ ದುಬಾಯಿಯಂತಹ ಹೊರಜಗತ್ತಿನಲ್ಲಿ ಕಂಡುಕೊಂಡ ಅನುಭವಗಳು.

ಈ ಹೊತ್ತಗೆಯ ಯಾವುದೇ ಪುಟಗಳತ್ತ ಕಣ್ಣಾಡಿಸಿದರೂ ನಮ್ಮನ್ನು ಕಾಡುವ ಒಂದಲ್ಲ ಒಂದು ಕವಿತೆ ಅನುಭವಿಸುವುದಕ್ಕೆ ಸಿಕ್ಕಿಯೇ ಸಿಗುತ್ತದೆ. ಹಾಗೆ ನೋಡಿದರೆ ಒಂದಿಷ್ಟು ಚಿಂತಿಸುವುದಕ್ಕೆ, ಮೆಲುಕು ಹಾಕುವುದಕ್ಕೆ, ಸ್ವಾದಿಸುವುದಕ್ಕೆ, ಆಸ್ವಾದಿಸುವುದಕ್ಕೆ, ವಾದಿಸುವುದಕ್ಕೆ, ಪ್ರವಾದಿಸುವುದಕ್ಕೆ, ಪಕ್ಕದ ಗೆಳೆಯರ ಜೊತೆ ಹರಟೆ ಹೊಡೆಯುವುದಕ್ಕೆ, ಹಂಚಿಕೊಳುವುದಕ್ಕೆ, ಸಂವಾದಿಸುವುದಕ್ಕೆ ಇಂತಹ ಹನಿಗಳು ಬೇಕು.

ನನಗೆ ಮೆಚ್ಚುಗೆಯಾದ ಕೆಲವನ್ನು ಇಲ್ಲಿ ಔಪಚಾರಿಕವಾಗಿ ಎತ್ತಿ ತೋರಿಸಲು ಇಷ್ಟ ಪಡುತ್ತೇನೆ.

'ಸ್ವಾರ್ಥ' ದಂತಹ ಕವಿತೆಯ ಶಿಲ್ಪವನ್ನು ನೋಡಬೇಕು, ಅದರ ವ್ಯಾಪ್ತಿಯನ್ನು ಗಮನಿಸಬೇಕು.

" ಸಾವಿರಾರು
ವರ್ಷಗಳ
ಅಬ್ಬರದ ಕಡಲು
ಸಾವಿರ
ಶಬ್ದಗಳು ಧ್ವನಿಸುವ
ತಾಯಿಯ ಒಡಲು

ಕಡಲಿಗೆ ಜನರ ಧ್ಯಾನ

ಒಡಲಲ್ಲಿ ಪ್ರೀತಿಯ ಗಾನ

ಯಾವುದು ಸ್ವಾರ್ಥ ?

ಹೇಳು ಕವಿ ನೀನಿದರ ಅರ್ಥ !
"

ಎಲ್ಲಿ ಹೋದರೂ ನನ್ನೂರು ನೆನಪು ಹಸಿರಾಗಿಯೇ ಇರುತ್ತದೆ. ಪರ ಊರಿಗೆ ಹೊರ ದೇಶಕ್ಕೆ ಹೋದಾಗ ಅದರ ಮಹತ್ವ ಇಮ್ಮಡಿಸುತ್ತದೆ. ಹಾಗಾಗಿಯೇ ಕವಿಗೆ ಖರ್ಜೂರದ ಸವಿಯಲ್ಲೂ ತನ್ನೂರ ನೆನಪು ಕಾಡುತ್ತದೆ.

" ಇಲ್ಲಿ
ಎಟಕುತ್ತದೆ
ಖರ್ಜೂರ
ಕೈಗಳಿಗೆ
ನೆನಪಾಗುತ್ತದೆ

ಮನೆ ಹಿತ್ತಿಲು

ಮರುಘಳಿಗೆ "
(ಪು.೮೫)

ಉರ್ದುವಿನ ಮಹಾಕವಿ ಇಕ್ಬಾಲ್, ಈ ಕವಿಯ ಮೇಲೆ ಬೀರಿದ 'ಪ್ರಭಾವ' ಕವಿತೆಯೂ ಇಲ್ಲಿದೆ.
" ನಿಮ್ಮ
ಪ್ರಭಾವವೇ

ಮಿತ್ರ ,

ನನ್ನಂತವನೂ

ಕವಿಯಾಗಿ
ಬಿಟ್ಟ

ಭಲೇ

ವಿಚಿತ್ರ ! "
(ಪು.೨೧)


" ಕವಿಗೆ
ಬೇಕು

ಜಾಹಿರಾತು

ಕೈಯಲ್ಲಿದ್ದರೂ

ತಿವಿಯುವಂತ ಮಾತು

ವ್ಯರ್ಥವಾಗುವುದು

ಲೇಖನಿಯಲ್ಲೇ ಕೂತು

ಅದಕ್ಕೆನಗೆ ಬೇಕು

ಜಾಹೀರಾತು "


ಅಹ್ಮದ್ ಅನ್ವರ್ ಅವರ ಈ ಕವಿತೆಯನ್ನು ಗಮನಿಸುವಾಗ ,

" ಪ್ರತಿಭೆಯೊಂದಿರಬೇಕು
ವ್ಯುತ್ಪನ್ನ ಮಾತಿರಬೇಕು

ಲೋಕಾನುಭವ ತಾನಿರಬೇಕು

ಕವಿಗೆ ಜಾಹೀರಾತು ಬೇಕು "

ಎನ್ನುವ ಕವಿ ಎಸ್. ವಿ. ಪರಮೇಶ್ವರ ಭಟ್ಟರ ಮುಕ್ತಕವೊಂದು ನೆನಪಾಗುತ್ತದೆ.

" ನಾಡಿಗೆ

ಬರುವಾಗ

ನನಗಿತ್ತು

ಮೀಸೆ

ಮತ್ತು ಗಡ್ಡ ,

ಇದನ್ನು

ಸವರಿ

ಹಾಕಲು

ಬರಬೇಕಿತ್ತೆ

ಇಲ್ಲಿಗೆ

ನಾನೆಷ್ಟು ದಡ್ಡ "
(ಪು.೧೦೧)


ಮನಸ್ಸಿಗೆ ಹೊಸತನ ನೀಡಿ ನಮ್ಮನ್ನು ಚಿಂತನೆಗೆ ಹಚ್ಚುವ ಭಿನ್ನ ಅಭಿನ್ನ ಅಭಿವ್ಯಕ್ತಿಯ ಇಂತಹ ಸಾಕಷ್ಟು ರಚನೆಗಳು ಈ ಸಂಕಲನದಲ್ಲಿವೆ . ಕವಿ, ಕಾವ್ಯ, ಸಾಹಿತ್ಯ, ಚುಟುಕುಗಳೆಂಬ ಕವಿತೆಗಳಿವೆ.
ಸೂರ್ಯ, ನೆರಳು, ಬೆಳಕು, ಮಳೆನೀರು, ನದಿ, ಜೀವನರೇಖೆಗಳಂತಹ ಹನಿಗಳಿವೆ.
ಪ್ರೀತಿ, ನೀತಿ, ಲಜ್ಜೆ, ಗುಣ, ಮತ್ಸರ, ಮನುಷ್ಯ, ಧರ್ಮ, ಕರ್ಮ, ಬದುಕು, ಆಹಾರ, ಅವಕಾಶ, ಬಾಲ್ಯದೀಪ, ಪಂಡಿತ, ಪ್ರಜಾಪ್ರಭುತ್ವ, ರಾಜಕೀಯ, ಭಯೋತ್ಪಾದನೆ, ಎನ್ ಕೌಂಟರ್ ನಂತಹ ಕವಿತೆಗಳಿವೆ.
ವಾಹನವಾಲರು, ಗೋವೆ, ಈ ನಾಡು, ಗಲ್ಪ್ ಮನೆ, ಮೊಬೈಲ್, ಕ್ರಿಕೆಟ್, ಟಿವಿ, ಲಾಟರಿ, ಛಾಯಾಚಿತ್ರ, ಫೋಟೋಗ್ರಾಫರ್, ಪತ್ರಿಕೆ, ಸೊಳ್ಳೆ, ತರಲೆ, ಸೆರೆ ಯಂತಹ ಅಭಿವ್ಯಕ್ತಿಗಳಿವೆ.

ಈ ಕೃತಿಗೆ ಪ್ರೀತಿಯ ಒಂದಿಷ್ಟು ಮಾತು ಪೋಣಿಸಿರುವ ಡಾ. ಮಾಧವಿ ಭಂಡಾರಿ ಹೇಳುವಂತೆ "ಬದುಕಿನ ವಿವಿಧ ಮುಖಗಳನ್ನು ಬಿಂಬಿಸುವ ಇಲ್ಲಿಯ ಕವಿತೆಗಳು ಭಾರತ ಗಾಥೆಯನ್ನು ಹಾಡುವುದರ ಜೊತೆಗೆ ದುಬಾಯಿ ಬಣ್ಣವನ್ನೂ ಬಯಲು ಮಾಡುತ್ತವೆ".

ತನ್ನ ಕವಿತೆಗಳೆಂದರೆ ಹತ್ತು ಮುತ್ತು ಪೋಣಿಸಿದಂತೆ, ಓದಿದಾಗ ಇಲ್ಲಿ ಕೀಟಲೆ, ತಲೆ ಸುತ್ತು ಮತ್ತು ಬರಿಸುವ ಶಕ್ತಿ ಅಲ್ಲಿಲ್ಲ ಎಂದೆಲ್ಲ ಕವಿ ಹಿಂದೇಟು ಹಾಕಿದರೂ ಬೇವು ಬೆಲ್ಲದ ಕವಿತೆ ಒಂದೊಂದೂ ಗತ್ತು ಗಮ್ಮತ್ತು ತಾಕತ್ತು ಹೊಂದಿವೆ. ಕೆಲವಂತೂ ಹನಿಗವನಗಳಿಗೆ ಒಳ್ಳೆಯ ಮಾದರಿ.
ಹೀಗೆ ಯಾವತ್ತೂ ನಮ್ಮನ್ನು ಕಾಡುವ 'ಬೇವು ಬೆಲ್ಲ'ದ ಹನಿಗವನಗಳ ಕವಿಯಿಂದ ನಾವು ಮತ್ತಷ್ಟು ನಿರೀಕ್ಷಿಸುವುದು ಉಳಿದೇ ಇದೆ.


2 comments:

  1. ಈ ಲೇಖನ ಅರ್ಧವಾಗಿದೆಯೆ? ಕೊನೆಯ ವಾಕ್ಯ ಪೂರ್ಣವೆನಿಸುವುದಿಲ್ಲವಲ್ಲ!

    ಊರಿಗೆ ಬಂದಾಗ ಈ ಪುಸ್ತಕ ಕೊಳ್ಳುವಂತಾಗಿದೆ. ಧನ್ಯವಾದಗಳು ಸರ್.

    ReplyDelete
  2. ಉತ್ತಮ ಬರಹ. ಸಂಕಲನದ ಎಲ್ಲ ಕವನಗಳನ್ನೂ ಓದಬೇಕೆನಿಸುತ್ತಿದೆ. ವಂದನೆಗಳು. -ಪ್ರೇಮಶೇಖರ

    ReplyDelete