Wednesday, August 19, 2009

ಚೆನ್ನೆ ಮಣೆ



ಚೆನ್ನೆ ಮಣೆಯಲ್ಲಿ ಮಂಜೊಟ್ಟಿ ಕಾಯಿಗಳು



ಮೀನಿನ ಆಕಾರದ
ಚೆನ್ನೆ ಮಣೆ


ಚೆನ್ನೆ ಮಣೆಯಲ್ಲಿ ಮಂಜೊಟ್ಟಿ ಕಾಯಿಗಳು

Sunday, August 16, 2009

ಆಟಿ ಜಾನಪದ-2



ಚೆನ್ನೆ ಮಣೆ ಆಟ ತುಳು ನಾಡಿನ ಜನಪ್ರಿಯವಾದ ಒಳಾಂಗಣ ಆಟ.

ಚೆನ್ನೆ ಮಣೆಯಲ್ಲಿ ೧೪ ಗುಳಿಗಳಿದ್ದು ಮಣೆಯ ಎಡ ಬಲಗಳ ಅಂಚುಗಳಲ್ಲಿ ಆಟವಾಡುವ ಕಾಯಿಗಳನ್ನು ಸಂಗ್ರಹಿಸಿಡಲು ಆಯತಾಕಾರದ ಪ್ರತ್ಯೇಕ ಎರಡು ಗುಳಿಗಳಿರುತ್ತವೆ. ಸುಮಾರು ಒಂದುವರೆಯಿಂದ ಎರಡಡಿ ಉದ್ದವಿರುವ ಮಣೆಯಿದು. ಎರಡು ಸಾಲಲ್ಲಿ ಏಳೇಳು ಗುಳಿಗಳು. ಏಳಕ್ಕಿಂತ ಹೆಚ್ಚು ಕಲ್ಲಿನ ಮಣೆಗಳೂ ಇವೆ.

ಈ ಆಟಕ್ಕೆ ಮಂಜೊಟ್ಟಿ ಮೊದಲಾದ ಕಾಯಿಗಳು ಬಳಕೆಯಾಗುತ್ತವೆ.
ಗುಲಗಂಜಿ , ಹೊಂಗೆ ಮರದ ಕಾಯಿ, ಹುಣಸೆ ಬೀಜ ಗಳನ್ನೂ ಬಳಸುತ್ತಾರೆ.

ಚೆನ್ನೆ ಆಟದಲ್ಲಿ ಚೆನ್ನೆ, ಪೆರ್ಗೆ, ಜೋಡು ಪೆರ್ಗೆ, ಸೀತೆ ಆಟ ಮೊದಲಾದ ವಿಧಗಳಿವೆ. ಯಾರೂ ಜೊತೆಗಿಲ್ಲದಾಗ ಒಬ್ಬರೇ ಆಟ ಆಡುತ್ತ ಬೇಸರ ಕಳೆಯಬಹುದಾದ ಆಟಕ್ಕೆ 'ಸೀತೆ ಆಟ' ಎಂದು ಹೆಸರು.

ಚೆನ್ನೆ ಮಣೆಗೆ ಅಟ್ಟುಗುಳಿ ಮಣೆ, ಹಳಗುಣಿ ಮಣೆ ಮೊದಲಾದ ಹೆಸರುಗಳಿವೆ.

ಫ್ರಿಕಾದಲ್ಲೂ ಚೆನ್ನೆಮಣೆ ಆಟ ಪ್ರಚಲಿತದಲ್ಲಿದೆ. ಅಲ್ಲಿ ಇದನ್ನು ಮಂಕಾಲ ಎನ್ನುತ್ತಾರೆ. ಆದರೆ ಅದರಲ್ಲಿ ಎರಡು ಸಾಲಿನ ಆರು ಗುಳಿಗಳು ಇರುತ್ತವೆ.

ಒಳಾಂಗಣ ಆಟವಾದರೂ ಹೊರಗಡೆ ದನ ಕರು ಮೇಯಿಸುತ್ತಿರುವಾಗ ಬಂಡೆಕಲ್ಲುಗಳ ಮೇಲೆ ಕೊರೆದುಮಾಡುವ ಗುಳಿಗಳಲ್ಲಿ ಈ ಆಟವನ್ನು ಆಡುವುದೂ ಇದೆ.

ಆಟಕ್ಕೆ ಈಗ ಗಾಜಿನ ಗೋಲಿಗಳು ಬಂದಿವೆ. ಅಲ್ಲದೆ ಚೆನ್ನೆಮಣೆ ಆಟವನ್ನು ಆಡಲು
internet ನಲ್ಲೂ ಸಾಫ್ಟ್ ವೇರ್ ಕೂಡ ಲಭ್ಯವಿದೆ.


Wednesday, July 22, 2009

ಆಟಿ ಜಾನಪದ -1


ಆಟಿ ಆಡಾ ಆಡಾ ಸೋಣ ಓಡಾ ಓಡಾ ...

ಸೌರಮಾನ ಪದ್ಧತಿಯಂತೆ ತುಳು ತಿಂಗಳು ಪಗ್ಗು, ಬೇಶ, ಕಾರ್ತೆಲ್ ಕಳೆದು ಬರುವ ಆಟಿ ತಿಂಗಳು ಎಂದರೆ ಕರ್ಕಟ ಮಾಸ "ಆಷಾಢ".

ಕರಾವಳಿ ನಾಡಿನ ತುಳುನಾಡಿಗೆ ಆಟಿ
ತಿಂಗಳೆಂದರೆ ಕಡುಕಷ್ಟದ ಕಾಲ. ಅನಿಷ್ಟದ ಕಾಲ. ಮಳೆಗಾಲದ ಕಾಠಿನ್ಯದ ಕಾಲ. ಸಿಡಿಲು, ಮಿಂಚು, ಬಿರುಗಾಳಿ, ಅಬ್ಬರದ ಮಳೆ, ನೆರೆಯಿಂದ ಕೂಡಿದ ಭಯ ಆತಂಕದ ದಿನಗಳ ಕಾಲ.

ಕಾದರೆ ವಿಪರೀತ ಬಿಸಿಲೇ ಬಿಸಿಲು, ಸುರಿದರೆ ಎಡೆಬಿಡದ ಜಡಿಮಳೆ.

ಇಂತಹ ವೈಪರೀತ್ಯ ಹವಾಮಾನದಲ್ಲಿ ಶರೀರಕ್ಕೆ ರೋಗ ತಟ್ಟುವುದು ಬೇಗ. ಅದಕ್ಕಾಗಿಯೇ ಆಟಿ ತಿಂಗಳ ಅಮಾವಾಸ್ಯೆ ದಿನ ಮುಂಜಾಗ್ರತೆಗಾಗಿ ಹಾಳೆ ಮರದ ತೊಗಟೆ ರಸ ಕುಡಿಯುವ ರೂಢಿಯಿದೆ.

ಹಾಲೆಮರದ ಗೆಲ್ಲುಗಳಲ್ಲಿ ಗೊಂಚಲು ಗೊಂಚಲು ಎಲೆಗಳ ಗುಂಪುಗಳಿರುತ್ತವೆ. ಒಂದು ಗೊಂಚಲಲ್ಲಿ ಏಳು ಎಳೆಗಳಿರುತ್ತವೆ.


ಈ ಮರಕ್ಕೆ ಏಲೆಳಗ, ಸಪ್ತಪರ್ಣಿ ಮೊದಲಾದ ಹೆಸರುಗಳಿವೆ. ಆಂಗ್ಲ ಭಾಷೆಯಲ್ಲಿ ಇದು Apocynaceae ( a large evergreen tree )

ಈ ಮರದ ರೆಂಬೆಯನ್ನು ದೀಪಾವಳಿಯ ಸಮಯದಲ್ಲಿ ನೆಲದಲ್ಲಿ ಊರಿ ಬಲೀಂದ್ರ ಪೂಜೆ ಮಾಡುತ್ತಾರೆ.

ವರ್ಷದ ಒಂದು ನಿರ್ದಿಷ್ಟ ದಿನದಂದು ಹಾಳೆ ಮರದ (ಪಾಳೆದ ಕೆತ್ತೆದ) ಕಹಿ ಮದ್ದನ್ನು ಕುಟುಂಬದ ಪ್ರತಿ ಸದಸ್ಯರು ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದು ಪರಂಪರೆ.




Sunday, June 21, 2009

ಮತ್ತು ಮತ್ತು ಗಮ್ಮತ್ತಿನ ನೂರೆಂಬತ್ತು ಹನಿಗಳ ಬೇವು-ಬೆಲ್ಲ

ಬೇವು-ಬೆಲ್ಲ
ಹನಿಗವನಗಳು
ಅಹ್ಮದ್ ಅನ್ವರ್
೨೦೦೮
ಬೆಲೆ:೪೦/-
ವಿಚಾರ ಪ್ರಕಾಶನ, ಮಂಗಳೂರು

'ಭಾರತ
ಗೀತ : ನೂರೊಂದು ಕವಿತೆಗಳು' (೧೯೯೯), 'ಗುಲ್ಮೊಹರ್ : ಆಯ್ದ ಕವಿತೆಗಳು' (೨೦೦೩), ಹಾಗೂ 'ನನ್ನ ಕನಸಿನ ಭಾರತ : ಲೇಖನಗಳ ಸಂಕಲನ ' (೨೦೦೩), ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಪರಿಚಿತರಾಗಿರುವ ಅಹ್ಮದ್ ಅನ್ವರ್ ಅವರ ನಾಲ್ಕನೆಯ ಕೃತಿಯೇ ' ಬೇವು-ಬೆಲ್ಲ ' .

ಈ ಕೃತಿಯ ಶೀರ್ಷಿಕೆಯ ಮೇಲೆಯೇ ಒಂದು ಸುಂದರವಾದ ಹನಿಗವನ ಹೊಸೆದಿದ್ದಾರೆ.
" ಜೀವನ ನೆರಳಿನ
ಸ್ವಾದವಿದು
ಬೇವು ಬೆಲ್ಲ
ಇದನು
ತೊರೆದೆನೆ
ಬದುಕಿಗೆ
ರುಚಿಯಿಲ್ಲ "
ಹೀಗೆನ್ನುತ್ತಲೇ ೧೮೦ ಹನಿಕಾವ್ಯಗಳಿಗೆ ಕವಿ ಇಲ್ಲಿ ತಮ್ಮ ಅನುಭದ ಲೇಪದ ಅಭಿವ್ಯಕ್ತಿರೂಪ ನೀಡಿದ್ದಾರೆ.

ಇಲ್ಲಿನ ಒಟ್ಟು ಹನಿಗಳನ್ನು ಎರಡು ನೆಲೆಗಳಲ್ಲಿ ನೋಡುವುದಕ್ಕೆ ಸಾಧ್ಯ. ಮೊದಲನೆಯದು ತನ್ನ ದೇಶ, ಜನ, ಭಾಷೆ, ಧರ್ಮ, ಆಚಾರವಿಚಾರಗಳಿಗೆ ಸಂಬಂಧಿಸಿದಂತೆ ಸಂವೇದನೆಗಳು. ಎರಡನೆಯದಾಗಿ ಕಡಲಾಚೆಗಿನ ದುಬಾಯಿಯಂತಹ ಹೊರಜಗತ್ತಿನಲ್ಲಿ ಕಂಡುಕೊಂಡ ಅನುಭವಗಳು.

ಈ ಹೊತ್ತಗೆಯ ಯಾವುದೇ ಪುಟಗಳತ್ತ ಕಣ್ಣಾಡಿಸಿದರೂ ನಮ್ಮನ್ನು ಕಾಡುವ ಒಂದಲ್ಲ ಒಂದು ಕವಿತೆ ಅನುಭವಿಸುವುದಕ್ಕೆ ಸಿಕ್ಕಿಯೇ ಸಿಗುತ್ತದೆ. ಹಾಗೆ ನೋಡಿದರೆ ಒಂದಿಷ್ಟು ಚಿಂತಿಸುವುದಕ್ಕೆ, ಮೆಲುಕು ಹಾಕುವುದಕ್ಕೆ, ಸ್ವಾದಿಸುವುದಕ್ಕೆ, ಆಸ್ವಾದಿಸುವುದಕ್ಕೆ, ವಾದಿಸುವುದಕ್ಕೆ, ಪ್ರವಾದಿಸುವುದಕ್ಕೆ, ಪಕ್ಕದ ಗೆಳೆಯರ ಜೊತೆ ಹರಟೆ ಹೊಡೆಯುವುದಕ್ಕೆ, ಹಂಚಿಕೊಳುವುದಕ್ಕೆ, ಸಂವಾದಿಸುವುದಕ್ಕೆ ಇಂತಹ ಹನಿಗಳು ಬೇಕು.

ನನಗೆ ಮೆಚ್ಚುಗೆಯಾದ ಕೆಲವನ್ನು ಇಲ್ಲಿ ಔಪಚಾರಿಕವಾಗಿ ಎತ್ತಿ ತೋರಿಸಲು ಇಷ್ಟ ಪಡುತ್ತೇನೆ.

'ಸ್ವಾರ್ಥ' ದಂತಹ ಕವಿತೆಯ ಶಿಲ್ಪವನ್ನು ನೋಡಬೇಕು, ಅದರ ವ್ಯಾಪ್ತಿಯನ್ನು ಗಮನಿಸಬೇಕು.

" ಸಾವಿರಾರು
ವರ್ಷಗಳ
ಅಬ್ಬರದ ಕಡಲು
ಸಾವಿರ
ಶಬ್ದಗಳು ಧ್ವನಿಸುವ
ತಾಯಿಯ ಒಡಲು

ಕಡಲಿಗೆ ಜನರ ಧ್ಯಾನ

ಒಡಲಲ್ಲಿ ಪ್ರೀತಿಯ ಗಾನ

ಯಾವುದು ಸ್ವಾರ್ಥ ?

ಹೇಳು ಕವಿ ನೀನಿದರ ಅರ್ಥ !
"

ಎಲ್ಲಿ ಹೋದರೂ ನನ್ನೂರು ನೆನಪು ಹಸಿರಾಗಿಯೇ ಇರುತ್ತದೆ. ಪರ ಊರಿಗೆ ಹೊರ ದೇಶಕ್ಕೆ ಹೋದಾಗ ಅದರ ಮಹತ್ವ ಇಮ್ಮಡಿಸುತ್ತದೆ. ಹಾಗಾಗಿಯೇ ಕವಿಗೆ ಖರ್ಜೂರದ ಸವಿಯಲ್ಲೂ ತನ್ನೂರ ನೆನಪು ಕಾಡುತ್ತದೆ.

" ಇಲ್ಲಿ
ಎಟಕುತ್ತದೆ
ಖರ್ಜೂರ
ಕೈಗಳಿಗೆ
ನೆನಪಾಗುತ್ತದೆ

ಮನೆ ಹಿತ್ತಿಲು

ಮರುಘಳಿಗೆ "
(ಪು.೮೫)

ಉರ್ದುವಿನ ಮಹಾಕವಿ ಇಕ್ಬಾಲ್, ಈ ಕವಿಯ ಮೇಲೆ ಬೀರಿದ 'ಪ್ರಭಾವ' ಕವಿತೆಯೂ ಇಲ್ಲಿದೆ.
" ನಿಮ್ಮ
ಪ್ರಭಾವವೇ

ಮಿತ್ರ ,

ನನ್ನಂತವನೂ

ಕವಿಯಾಗಿ
ಬಿಟ್ಟ

ಭಲೇ

ವಿಚಿತ್ರ ! "
(ಪು.೨೧)


" ಕವಿಗೆ
ಬೇಕು

ಜಾಹಿರಾತು

ಕೈಯಲ್ಲಿದ್ದರೂ

ತಿವಿಯುವಂತ ಮಾತು

ವ್ಯರ್ಥವಾಗುವುದು

ಲೇಖನಿಯಲ್ಲೇ ಕೂತು

ಅದಕ್ಕೆನಗೆ ಬೇಕು

ಜಾಹೀರಾತು "


ಅಹ್ಮದ್ ಅನ್ವರ್ ಅವರ ಈ ಕವಿತೆಯನ್ನು ಗಮನಿಸುವಾಗ ,

" ಪ್ರತಿಭೆಯೊಂದಿರಬೇಕು
ವ್ಯುತ್ಪನ್ನ ಮಾತಿರಬೇಕು

ಲೋಕಾನುಭವ ತಾನಿರಬೇಕು

ಕವಿಗೆ ಜಾಹೀರಾತು ಬೇಕು "

ಎನ್ನುವ ಕವಿ ಎಸ್. ವಿ. ಪರಮೇಶ್ವರ ಭಟ್ಟರ ಮುಕ್ತಕವೊಂದು ನೆನಪಾಗುತ್ತದೆ.

" ನಾಡಿಗೆ

ಬರುವಾಗ

ನನಗಿತ್ತು

ಮೀಸೆ

ಮತ್ತು ಗಡ್ಡ ,

ಇದನ್ನು

ಸವರಿ

ಹಾಕಲು

ಬರಬೇಕಿತ್ತೆ

ಇಲ್ಲಿಗೆ

ನಾನೆಷ್ಟು ದಡ್ಡ "
(ಪು.೧೦೧)


ಮನಸ್ಸಿಗೆ ಹೊಸತನ ನೀಡಿ ನಮ್ಮನ್ನು ಚಿಂತನೆಗೆ ಹಚ್ಚುವ ಭಿನ್ನ ಅಭಿನ್ನ ಅಭಿವ್ಯಕ್ತಿಯ ಇಂತಹ ಸಾಕಷ್ಟು ರಚನೆಗಳು ಈ ಸಂಕಲನದಲ್ಲಿವೆ . ಕವಿ, ಕಾವ್ಯ, ಸಾಹಿತ್ಯ, ಚುಟುಕುಗಳೆಂಬ ಕವಿತೆಗಳಿವೆ.
ಸೂರ್ಯ, ನೆರಳು, ಬೆಳಕು, ಮಳೆನೀರು, ನದಿ, ಜೀವನರೇಖೆಗಳಂತಹ ಹನಿಗಳಿವೆ.
ಪ್ರೀತಿ, ನೀತಿ, ಲಜ್ಜೆ, ಗುಣ, ಮತ್ಸರ, ಮನುಷ್ಯ, ಧರ್ಮ, ಕರ್ಮ, ಬದುಕು, ಆಹಾರ, ಅವಕಾಶ, ಬಾಲ್ಯದೀಪ, ಪಂಡಿತ, ಪ್ರಜಾಪ್ರಭುತ್ವ, ರಾಜಕೀಯ, ಭಯೋತ್ಪಾದನೆ, ಎನ್ ಕೌಂಟರ್ ನಂತಹ ಕವಿತೆಗಳಿವೆ.
ವಾಹನವಾಲರು, ಗೋವೆ, ಈ ನಾಡು, ಗಲ್ಪ್ ಮನೆ, ಮೊಬೈಲ್, ಕ್ರಿಕೆಟ್, ಟಿವಿ, ಲಾಟರಿ, ಛಾಯಾಚಿತ್ರ, ಫೋಟೋಗ್ರಾಫರ್, ಪತ್ರಿಕೆ, ಸೊಳ್ಳೆ, ತರಲೆ, ಸೆರೆ ಯಂತಹ ಅಭಿವ್ಯಕ್ತಿಗಳಿವೆ.

ಈ ಕೃತಿಗೆ ಪ್ರೀತಿಯ ಒಂದಿಷ್ಟು ಮಾತು ಪೋಣಿಸಿರುವ ಡಾ. ಮಾಧವಿ ಭಂಡಾರಿ ಹೇಳುವಂತೆ "ಬದುಕಿನ ವಿವಿಧ ಮುಖಗಳನ್ನು ಬಿಂಬಿಸುವ ಇಲ್ಲಿಯ ಕವಿತೆಗಳು ಭಾರತ ಗಾಥೆಯನ್ನು ಹಾಡುವುದರ ಜೊತೆಗೆ ದುಬಾಯಿ ಬಣ್ಣವನ್ನೂ ಬಯಲು ಮಾಡುತ್ತವೆ".

ತನ್ನ ಕವಿತೆಗಳೆಂದರೆ ಹತ್ತು ಮುತ್ತು ಪೋಣಿಸಿದಂತೆ, ಓದಿದಾಗ ಇಲ್ಲಿ ಕೀಟಲೆ, ತಲೆ ಸುತ್ತು ಮತ್ತು ಬರಿಸುವ ಶಕ್ತಿ ಅಲ್ಲಿಲ್ಲ ಎಂದೆಲ್ಲ ಕವಿ ಹಿಂದೇಟು ಹಾಕಿದರೂ ಬೇವು ಬೆಲ್ಲದ ಕವಿತೆ ಒಂದೊಂದೂ ಗತ್ತು ಗಮ್ಮತ್ತು ತಾಕತ್ತು ಹೊಂದಿವೆ. ಕೆಲವಂತೂ ಹನಿಗವನಗಳಿಗೆ ಒಳ್ಳೆಯ ಮಾದರಿ.
ಹೀಗೆ ಯಾವತ್ತೂ ನಮ್ಮನ್ನು ಕಾಡುವ 'ಬೇವು ಬೆಲ್ಲ'ದ ಹನಿಗವನಗಳ ಕವಿಯಿಂದ ನಾವು ಮತ್ತಷ್ಟು ನಿರೀಕ್ಷಿಸುವುದು ಉಳಿದೇ ಇದೆ.


Wednesday, June 17, 2009

ಲೋಕ ಕಾಪುನ ದೆಂಜಿ


ಈ ಬೂಮಿದ ನಾಲ್ ಸುತ್ತಲಾ ಕಡಲ್ ಉಂಡುಗೆ. ಈ ಕಡಲ್ಡ್ ಬೂಮಿಡ್ ಉಪ್ಪುನಾತೆ ಬಗೆತ ಮುರ್ಗೊ ಜಂತುಳು ಉಳ್ಳಗೆ.

ಬೂಮಿಡ್ ನಾಯಿ ಉಂಡಾ ನೀರ್ಡ್ ನೀರ್ನಾಯಿ ಉಂಡು. ಬೂಮಿಡ್ ಆನೆ ಉಂಡಾ ನೀರ್ಡ್ ನೀರಾನೆ ಉಂಡು. ಅಂಚಾದ್ ಕಡಲ್ಡ್ ಮೀನುಳು ಮಾತ್ರೆ ಉಪ್ಪುನವತ್ತ್ .

ಇಂಚಿತ್ತಿ ಕಡಲ್ಡ್ ಏತ್ ಮಲ್ಲ ಮೀನ್ ಉಂಡು ಏತ್ ಎಲ್ಯ ಮೀನ್ ಉಂಡುಂದ್ ಪನ್ಯೆರೆ ಮಿನಿ ಬಲ್ಲಿ. ಒಂಜಿ ಮೀನ್ ಮಾತ್ರೆ ಬಾರೀ ಮಲ್ಲವು. ಅವು ಈ ಬೂಮಿಗ್ ಸುತ್ತು ಪಾಡ್ದ್ ಉಂಡು. ಅಂಚಾದ್ ಅಯಿತ ಉದ್ದ ಏತ್ ಪಂಡ್ದ್ ಪನ್ಯೆರೆ ತೀರಂದ್. ಈ ಮೀನ್ದ ಬಾಯಿಗ್ ಅಯಿತ ಬೀಲ ಮುಟ್ಟುನಾತ್ ಅವು ಬಳತೊಂದು ಉಂಡು. ಆಂಡ ಏಪ ಅಯ್ತ ಬೀಲ ತರೆಕ್ ಮುಟ್ಟುವಾ ಆನಿಗೇ ಈ ಲೋಕ ಪ್ರಳಯ ಆಯಿಲೆಕೊ. ಅಪಗ ಬುಮಿಲಾ ಇಜ್ಜಿ ಬೂಮಿದ ಜುವ ಜಂತುಲ್ಲ ಇಜ್ಜ. ನಾಲೊರ್ಮೆ ಕಡಲೇ ಆದ್ ಪೋವು.

ಆಂಡ ಅಂಚ ಆಯೆರೆ ಬಲ್ಲಿದೆ. ಈ ಲೋಕ ಪ್ರಳಯ ಆಂಡ ಎಂಚ ? ಲೋಕ, ಲೋಕದ ಬದ್ಕ್ ಭಾಗ್ಯ ಒರಿಯೋಡು. ಅಯಿಕಾದ್ ಮಲ್ಲ ಒಂಜಿ ದೆಂಜಿ ಕಾತೊಂದೆ ಉಪ್ಪು. ಎಪೊ ಆ ಮೀನ್ದ ಬೀಲ ಅಯಿತ ತರೆಕ್ ಕೊಲ್ಪೆರೆ ಆಪುಂಡ ಅಪಗ ಕರ್ಕ ಪಂಡ್ದ್ ಬೀಲದ ಕೊಡಿನ್ ದೆಂಜಿ ಕತ್ತೆರು. ಎಪೋಗುಲ ಆ ಮೀನ್ದ ಬೀಲ ಅಯಿತ ತರೆಕ್ ಕೊಲ್ಪುಲೇಕೋ ಇಜ್ಜಿ. ಕೊಲ್ಪೆರೆ ಈ ದೆಂಜಿ ಬುಡ್ದ್ ಕೊರಂದ್.

ಉಂದು ಲೋಕ ಕಾಪುನ ದೆಂಜಿ.

ಆಟಿಯ ದಿನಗಳು

ಬಿಸಿಲೂ ಉಂಟು ಮಳೆಯೂ ಉಂಟು
ನರಿಗಳಿಗೀಗಲೇ ಮದುವೆಯಂತೆ
ಆಟಿಯ ಕಾಲದಾಟವಿದಂತೆ
ಮಕ್ಕಳಿಗೆಲ್ಲ ಸಂಭ್ರಮವಂತೆ

ಬಂದರೆ ಜೋರು ಮಳೆಯೇ ಮಳೆಯು
ಕಾದರೆ ಭಾರಿ ಬಿಸಿಲೇ ಬಿಸಿಲು
ಆಟಿ ದಿನಗಳ ಮಲಕವಿದಂತೆ
ಯಾರಿಗು ಬೇಡ ಕಾಲವಿದಂತೆ

ಬಂತೇ ಬಂತು
ಆಟಿಯಮಾಸೆ
ಹಾಳೇ ಮರದ ರಸವೂ ಬಂತು
ಬಾಯಿಗೆ ಕಹಿಯು ಬಾಳಿಗೆ ಸಿಹಿಯು
ರೋಗವನೆಲ್ಲ ತಡೆಯುವುದಂತೆ

ಏನದು ಸ್ವರವು ತೆಂಬರೆಯೇನು?

ನೋಡಿರಿ ಆಟಿಕಳಂಜ ಬಂದ !
ಮನೆ ಮನೆಗೆಲ್ಲ ಒಸಗೆಯ ತಂದ
ನೀಗುವೆ ಮಾರಿ ರೋಗವನೆಂದ

ತಿನ್ನಲು ಏನು ಮನೆಯೊಳಗಿಲ್ಲ
ಹಿತ್ತಿಲು ಬಯಲು ಗುಡ್ಡಗಳಿಂದ
ತಂದರೆ ಕೊಯ್ದು ಹಸುರೆಲೆ ಚಿಗುರು
ಸವಿಯಲುಬಹುದು ಬಹುವಿಧದಡುಗೆ